ಅಡಿಸನ್ನನ ರೋಗ
	
ಮೂತ್ರಪಿಂಡಗಳ ಮೇಲಣ (ಅಡ್ರಿನಲ್) ನಾಳವಿರದ ಗ್ರಂಥಿಗಳ ರಗಟೆ (ಕಾರ್ಟೆಕ್ಸ್) ಕೆಟ್ಟಿರುವ ಈ ಅಪೂರ್ವ ರೋಗದ ಲಕ್ಷಣಗಳನ್ನು ಮೊದಲು (1855) ತಾಮಸ್ ಅಡಿಸನ್ ವಿವರಿಸಿದ. ಈ ರೋಗವನ್ನು ಅಡ್ರಿನಲ್ ರಗಟೆಯ ನಿಜಕೆಲಸದಿಳಿತವೆಂದೂ ಕರೆಯಬಹುದು. ರಕ್ತಕೊರೆ, ಕಂದು ಬಣ್ಣಕ್ಕೇರಿದ ಚರ್ಮ, ಬಾಯೊಳಗೆ ಕಂದು ಕಲೆಗಳು, ಅತಿಯಾದ ಅಲಸಿಕೆ, ನಿತ್ರಾಣ, ಗುಂಡಿಗೆಯ ದುರ್ಬಲ ಬಡಿತ, ರಕ್ತ ಒತ್ತಡದ ಇಳಿವರಿ, ಮನೋದೌರ್ಬಲ್ಯ, ನಿಧಾನವಾಗಿ ಈ ರೋಗದಲ್ಲಿ ಕಾಣಿಸಿಕೊಳ್ಳುತ್ತವೆ. ಹೆಂಗಸರಿಗಿಂತ ಗಂಡಸರಲ್ಲಿ ಹೆಚ್ಚು. ಎಳೆಯರಿಗಿಂತಲೂ 30 ವರ್ಷ ದಾಟಿದವರಲ್ಲಿ ಬರುವುದು ಸಾಮಾನ್ಯ. 
	
ಅಡ್ರಿನಲ್ ಗ್ರಂಥಿಗಳಿಗೆ ಹತ್ತುವ ಕ್ಷಯ, ಕಾರಣವಿಲ್ಲದ ಅನುವಳಿಕೆ, ಗಂತಿ ಬೆಳೆತ ಇಲ್ಲವೇ ಅದರ ಒತ್ತಡ, ಮೈ ತನ್ನ ಅಂಗವನ್ನೇ ಹೊರದೂಡುವ ಕ್ರಿಯೆ-ಇವು ಈ ರೋಗದ ಕಾರಣಗಳು. ಈ ಗ್ರಂಥಿಗಳನ್ನು ತೆಗೆದು ಹಾಕಿದರೂ ಅಷ್ಟೇ. ಈ ರೋಗಕ್ಕೆ ಕ್ಷಯ ಕಾರಣವಾಗಿದ್ದರೆ, ಬೇರೆ ಅಂಗಗಳಲ್ಲೂ ಕ್ಷಯ ಇರುವುದು ಸಾಮಾನ್ಯ. ಮೈಯಲ್ಲಿನ ಸೋಡಿಯಂ, ಪೊಟ್ಯಾಸಿಯಂ, ಕ್ಲೋರೈಡುಗಳ ಹತೋಟಿ. ಮೈಯಲ್ಲಿನ ನೀರಿನ ಸಮತೋಲ, ಒಟ್ಟು, ಕೊಬ್ಬು, ಪ್ರೊಟೀನುಗಳ ಜೀವವಸ್ತುಕರಣದ (ಮೆಟಬಾಲಿಸಮ್) ಸಮತೋಲಗಳಂಥ, ಅಡ್ರಿನಲ್ ಗ್ರಂಥಿಯ ರಗಟೆಯ ಮುಖ್ಯವಾದ ನಿಜಗೆಲಸಗಳು ಕೆಟ್ಟಿರುವುದರಿಂದ ಹೀಗಾಗುತ್ತದೆ.
	
ಪೂರಾ ಬಲಿತಿರುವ ರೋಗವನ್ನು ಗುರುತಿಸುವುದು ಕಷ್ಟವಲ್ಲ. ಎಳೆಯದರಲ್ಲಿ ರೋಗವನ್ನು ಗುರುತಿಸಲು ಪ್ರಯೋಗಾಲಯದ ಪರೀಕ್ಷೆಗಳ ನೆರವು ಬೇಕು. ಮೈಚರ್ಮ ವಿಚಿತ್ರ ತೆರನ ಮಂಕುಹಳದಿ ಇಲ್ಲವೇ ಕಂದುಬಣ್ಣಕ್ಕೆ ತಿರುಗುವುದು ಮೊದಲ ಚಿಹ್ನೆಯಾಗಿರಬಹುದು. ಹಿಂದಿನ ಕಾಲದಲ್ಲಿ ಅಡಿಸನ್ನನ ರೋಗದವನ ಪಾಡು ಯಾರಿಗೂ ಬೇಡದಂತಿತ್ತು. ವಿಪರೀತ ಬೆವರಿಕೆ, ವಾಂತಿ, ಉಚ್ಚಾಟ, ಸೋಡಿಯಂ ಕಡಿಮೆಯಿರುವ ಆಹಾರ ಸೇವನೆ, ಹೀಗೆ ಮೈಯಿಂದ ಸೋಡಿಯಂ, ಕ್ಲೋರೈಡುಗಳನ್ನು ಕಳೆಯುವ ಯಾವ ಸ್ಥಿತಿಯಾದರೂ ಸರಿಯೇ, ರೋಗಿಯನ್ನು ಸುಸ್ತುಮಾಡಿ ಸಾಯಿಸುತ್ತಿತ್ತು. ಮೈದುಡಿತ, ಶಸ್ತ್ರಕ್ರಿಯೆಯ ಒತ್ತರ, ಅರಿವಳಿಕಗಳ (ಅನೀಸ್ತೆಟಿಕ್ಸ್) ಸೇವನೆ ಒಂದೊಂದು ರೋಗಿಗೆ ಗಂಡಾಂತರ ಆಗುತ್ತಿತ್ತು.
	
ಅಡ್ರಿನಲ್ ರಗಟೆಯ ಕಚ್ಚಾ ಸಾರಕವನ್ನು 1930ರಲ್ಲಿ ತಯಾರಿಸಿ, ಜೀವಕುತ್ತಿನಲ್ಲಿ ಸಿಕ್ಕಿರುವ ರೋಗಗಳಿಗೆ ಕೊಟ್ಟಾಗ ಆಶಾಕಿರಣ ಮೂಡಿತು. ಈ ಸಾರಕ ಸುಲಭವಾಗಿ ದೊರೆಯದೆ, ದುಬಾರಿ ಬೆಲೆಯದಾಗಿ ಗುಣದಲ್ಲೂ ನೆಚ್ಚಿಕೊಳ್ಳುವ ಹಾಗಿರಲಿಲ್ಲ. ಅಡಿಗೆ ಉಪ್ಪನ್ನು ಹೇರಳವಾಗಿ ಕೊಟ್ಟರೆ ರೋಗಿ ತುಸು ಚೇತರಿಸಿಕೊಳ್ಳುವನೆಂದು ರಾಬರ್ಟ್ ಲೋಯೆಬ್ (1932) ಕಂಡುಕೊಂಡ. ಮೈಯಲ್ಲಿ ಪೊಟ್ಯಾಸಿಯಂ ಹೆಚ್ಚಾದರೂ ರೋಗ ಹೆಚ್ಚುವುದು (1937) ಗೊತ್ತಾಯಿತು. ಅದೇ ವರ್ಷ ತಯಾರಾದ, ಡಿಸಾಕ್ಸಿಕಾರ್ಟಿಕೊಸ್ಟಿರೋನ್ ಮದ್ದಿನಿಂದ ಮೈಯಲ್ಲಿನ ಖನಿಜದ ಜೀವವಸ್ತುಕರಣವನ್ನು ಅಂಕೆಗೊಳಿಸುವಂತಾಗಿ ಅನೇಕ ರೋಗಿಗಳಿಗೆ ಹೆಚ್ಚಿನ ಗುಣ ಕಂಡಿತು. ಆದರೂ ಪೂರ್ತಿ ವಾಸಿ ಮಾಡಲಿಲ್ಲ. ರಕ್ತದಲ್ಲಿನ ಖನಿಜಗಳನ್ನು ಅಂಕೆಗೊಳಿಸುವುದೊಂದೇ ಅಲ್ಲದೆ, ಇನ್ನೂ ಏನೋ ಕೊರೆ ಇದೆ ಎನ್ನಿಸುತ್ತಿತ್ತು.
	
ಕೊನೆಯದಾಗಿ 1948ರಲ್ಲಿ ತಯಾರಾದ ಕಾರ್ಟಿಸೋನನ್ನು ಡಿಸಾಕ್ಸಿಕಾರ್ಟಿಕೊಸ್ಟಿರೋನ್‍ನೊಂದಿಗೆ ಸೇರಿಸಿ ದಿನವೂ ರೋಗಿಗೆ ಕೊಟ್ಟಾಗ ರೋಗಿ ಎಂದಿನ ಲವಲವಿಕೆ, ಚಟುವಟಿಕೆಗಳನ್ನು ಮರಳಿ ಪಡೆವಂತಾದ. ಈ ರೋಗಿಗಳಲ್ಲಿ ಕೊರೆಯಾಗಿರುವ ಕಾರ್ಟಿಸೋನ್ ಮಾತ್ರ ಕೊಟ್ಟರೆ ಮೈಯಿಂದ ಉಪ್ಪು ಹೆಚ್ಚಾಗಿ ಹೊರಬೀಳುವುದರಿಂದ, ಜೊತೆಗೆ ಡಿಸಾಕ್ಸಿಕಾರ್ಟಿಸೋನನ್ನೂ ಕೊಡುತ್ತಿದ್ದರೆ, ರೋಗಿ ಆರೋಗ್ಯವಾಗಿರಬಹುದು. ಅಡ್ರಿನಲ್ ರಗಲೆಯ ಅಸಮರ್ಥತೆಯನ್ನು ಹೊರಗಿನಿಂದ ಗ್ಲುಕೋಕಾರ್ಟಿಕಾಯಿಡ್‍ಗಳನ್ನು ನಿರಂತರವಾಗಿ ಕೊಟ್ಟು ಅದರ ಕೊರತೆಯನ್ನು ನೀಗಿಸಿ ರೋಗ ಲಕ್ಷಣಗಳನ್ನು ದೂರ ಮಾಡಿಕೊಳ್ಳಬೇಕು. (ನೋಡಿ- ಅಡಿಸನ್,-ತಾಮಸ್)
(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ